ಹೆಣ್ಣುಮಕ್ಕಳ ಭವಿಷ್ಯಕ್ಕೆ ಸರ್ಕಾರದ ಗ್ಯಾರಂಟಿ: ‘ಸುಕನ್ಯಾ ಸಮೃದ್ಧಿ ಯೋಜನೆ’ಯಲ್ಲಿ ಪ್ರತಿದಿನ ಕೇವಲ ₹100 ಉಳಿಸಿ, ಪಡೆಯಿರಿ ₹15 ಲಕ್ಷ! (ಸಂಪೂರ್ಣ ಮಾಹಿತಿ)
.webp)
ಪ್ರತಿ ತಂದೆ-ತಾಯಿಗೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ತುಂಬಾ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ.ಅದರಲ್ಲೂ ಮನೆಯಲ್ಲಿ ಹೆಣ್ಣುಮಕ್ಕಳಿದ್ದರೆ ಹೆಚ್ಚು ಕಾಳಜಿ ಹಾಗೂ ಪ್ರೀತಿ ಹೆಚ್ಚಾಗಿರುತ್ತದೆ ಹಾಗೆಯೇ ಮಗಳ ಜವಾಬ್ದಾರಿ ಕೂಡ ತುಸು ಹೆಚ್ಚೇ ಇರುತ್ತದೆ. ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಗಳ ಉನ್ನತ ಶಿಕ್ಷಣ (ಮೆಡಿಕಲ್, ಇಂಜಿನಿಯರಿಂಗ್, ಅಥವಾ ವಿದೇಶಿ ವ್ಯಾಸಂಗ), ಅವಳ ಮದುವೆ ಮತ್ತು ಆಕೆಯು ಸ್ವಾತಂತ್ರ ವಾಗಿ ಒಳ್ಳೆಯ ಜೀವನ ನಡೆಸೋಕೆ ಗಟ್ಟಿಯಾದ ಹಣಕಾಸಿನ ಭದ್ರತೆ ಕೊಡೋದು ಪ್ರತಿಯೊಬ್ಬ ಪೋಷಕರ ದೊಡ್ಡ ಜವಾಬ್ದಾರಿ ಹಾಗೂ ಗುರಿಯಾಗಿರುತ್ತದೆ.
ಆದರೆ, ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಶಿಕ್ಷಣದ ವೆಚ್ಚ ಮತ್ತು ಹಣದಮೌಲ್ಯ ಕಡಿಮೆಯಾಗುತ್ತಿರುವುದರಿಂದ ಈ ಕಾಲದಲ್ಲಿ, ನಮ್ಮ ಸಾಮಾನ್ಯ ಆದಾಯದಿಂದ ಭವಿಷ್ಯಕ್ಕಾಗಿ ಕೂಡಿಡುವುದು ಸುಲಭದ ಮಾತಲ್ಲ. ಬ್ಯಾಂಕ್‌ನ ಸಾಮಾನ್ಯ ಉಳಿತಾಯ ಖಾತೆಯಲ್ಲಿ ನೀವು ಕೂಡಿಟ್ಟ ಹಣ, ಹತ್ತು ವರ್ಷಗಳ ನಂತರ ಅದೇ ಮೌಲ್ಯವನ್ನು ಹೊಂದಿರುತ್ತದೆ ಎಂಬ ಗ್ಯಾರಂಟಿ ಇಲ್ಲದಂತಾಗಿದೆ.
ಇದೇ ಚಿಂತೆಯಲ್ಲಿರುವ ಪೋಷಕರಿಗೆ ಒಂದು ಅದ್ಭುತವಾದ, 100% ಸುರಕ್ಷಿತವಾದ ಮತ್ತು ಕೇಂದ್ರ ಸರ್ಕಾರದ ಗ್ಯಾರಂಟಿ ಇರುವ ಅತ್ಯುತ್ತಮ ಪರಿಹಾರವೆಂದರೆ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana – SSY). ನಿಮ್ಮ ಮಗಳ ಹೆಸರಿನಲ್ಲಿ ಇಂದು ನೀವು ಮಾಡುವ ಸಣ್ಣ ಉಳಿತಾಯ, ನಾಳೆ ಅವಳ ಜೀವನದ ಅತ್ಯಂತ ದೊಡ್ಡ ಆರ್ಥಿಕ ಆಧಾರವಾಗಬಲ್ಲದು. ಹಾಗಾದರೆ ಏನಿದು ಯೋಜನೆ? ಇದರ ಸಂಪೂರ್ಣ ಲಾಭಗಳೇನು? ಲೆಕ್ಕಾಚಾರ ಹೇಗೆ? ಆನ್‌ಲೈನ್ ಮೂಲಕ ನಿರ್ವಹಿಸುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಎ ಟು ಝೆಡ್ (A to Z) ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆ (SSY) ಎಂದರೇನು?
ಸುಕನ್ಯಾ ಸಮೃದ್ಧಿ ಯೋಜನೆಯು ಭಾರತ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಹಾಗೂ ಜನಪ್ರಿಯ ‘ಬೇಟಿ ಬಚಾವೋ, ಬೇಟಿ ಪಡಾವೋ’ (Beti Bachao, Beti Padhao – ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವನ್ನು ಓದಿಸಿ) ಅಭಿಯಾನದ ಅಡಿಯಲ್ಲಿ ಆರಂಭಿಸಲಾದ ಒಂದು ವಿಶೇಷವಾದ ಉಳಿತಾಯ ಯೋಜನೆಯಾಗಿದೆ.
ದೇಶದ ಹೆಣ್ಣುಮಕ್ಕಳ ಭವಿಷ್ಯವನ್ನು ಆರ್ಥಿಕವಾಗಿ ಭದ್ರಪಡಿಸುವುದು, ತಿಳುವಳಿಕೆ ಇಲ್ಲದ ವಯಸ್ಸಿನಲ್ಲಿ ಮದುವೆ(ಬಾಲ್ಯವಿವಾಹ) ತಡೆಗಟ್ಟಲು ಮತ್ತು ಹೆಣ್ಣುಮಕ್ಕಳ ವಿದ್ಯಾಭ್ಯಾಸ ಮತ್ತು ಉನ್ನತ ಶಿಕ್ಷಣಕ್ಕೆ ಸ್ಥಾನಮಾನಕ್ಕೆ ಪ್ರೋತ್ಸಾಹ ನೀಡಿ ಅವರನ್ನು ಸಬಲೀಕರಣಗೊಳಿಸುವ ಏಕೈಕ ಉದ್ದೇಶದಿಂದ 2015 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಜಾರಿಗೆ ತಂದರು.
ಇದು ಕೇವಲ ಒಂದು ಹೆಣ್ಣುಮಕ್ಕಳಿಗಾಗಿ ಮಾತ್ರ ಮೀಸಲಾಗಿರುವ ಪ್ರತ್ಯೇಕ ಬ್ಯಾಂಕ್ ಖಾತೆಯಾಗಿದೆ. ಇದರಲ್ಲಿ ನೀವು ಜಮೆ ಮಾಡುವ ಹಣವು ದೀರ್ಘಕಾಲದವರೆಗೆ ಅತ್ಯುತ್ತಮ ಚಕ್ರಬಡ್ಡಿಯೊಂದಿಗೆ (Compound Interest) ಬೆಳೆಯುತ್ತದೆ. ಶೇರು ಮಾರುಕಟ್ಟೆಯ (Stock Market) ಯಾವುದೇ ಏರಿಳಿತಗಳ, ನಷ್ಟದ ಭಯವಿಲ್ಲದೆ, 100% ಸರ್ಕಾರದ ರಕ್ಷಣೆಯಲ್ಲಿ ನಿಮ್ಮ ಕಷ್ಟದ ಹಣ ಅತ್ಯಂತ ಸುರಕ್ಷಿತವಾಗಿರುತ್ತದೆ ಎಂಬ ಘೋಷಣೆಯನ್ನು ಜಾರಿಗೆ ತಂದರು .
ಈ ಯೋಜನೆಯಲ್ಲೇ ಏಕೆ ಹೂಡಿಕೆ ಮಾಡಬೇಕು? (ಯೋಜನೆಯ ಟಾಪ್ 5 ಲಾಭಗಳು)
ಮಾರುಕಟ್ಟೆಯಲ್ಲಿ ಹತ್ತು-ಹಲವು ಉಳಿತಾಯ ಯೋಜನೆಗಳು ಲಭ್ಯವಿದ್ದರೂ, ನಿಮ್ಮ ಮಗಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನೇ ಏಕೆ ಆಯ್ಕೆ ಮಾಡಬೇಕು? ಇದಕ್ಕೆ ಇರುವ ಪ್ರಬಲ ಕಾರಣಗಳು ಇಲ್ಲಿವೆ:
- ಅತಿ ಹೆಚ್ಚಿನ ಬಡ್ಡಿ ದರ (High Interest Rate): ಅಂಚೆ ಕಚೇರಿ ಅಥವಾ ಯಾವುದೇ ಬ್ಯಾಂಕ್‌ಗಳ ಸಾಮಾನ್ಯ ಫಿಕ್ಸೆಡ್ ಡೆಪಾಸಿಟ್ (FD) ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಯೋಜನೆಗಳಿಗೆ ಹೋಲಿಸಿದರೆ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಯಾವಾಗಲೂ ಹೆಚ್ಚು ಬಡ್ಡಿ ಸಿಗುತ್ತದೆ. ಪ್ರಸ್ತುತ ಈ ಯೋಜನೆಗೆ ವಾರ್ಷಿಕ 8.2% ರಷ್ಟು ಆಕರ್ಷಕ ಬಡ್ಡಿ ದರದಲ್ಲಿ ಸಿಗುತ್ತದೆ.
- ತೆರಿಗೆ ವಿನಾಯಿತಿಯ ತ್ರಿಬಲ್ ಲಾಭ (EEE Tax Benefit): ಆದಾಯ ತೆರಿಗೆ ಕಾಯ್ದೆಯ (Income Tax Act) ಸೆಕ್ಷನ್ 80C ಅಡಿಯಲ್ಲಿ, ಈ ಯೋಜನೆಯು ಅತ್ಯುನ್ನತವಾದ ‘Exempt-Exempt-Exempt’ (EEE) ವರ್ಗಕ್ಕೆ ಸೇರುತ್ತದೆ. ಇದರರ್ಥ; ನೀವು ಪ್ರತಿ ವರ್ಷ ಹೂಡಿಕೆ ಮಾಡುವ ಹಣ ತೆರಿಗೆ ಮುಕ್ತ, ಆ ಹಣದ ಮೇಲೆ ಬರುವ ಬಡ್ಡಿ ತೆರಿಗೆ ಮುಕ್ತ, ಮತ್ತು ಕೊನೆಯಲ್ಲಿ ಪಡೆಯುವ ಬೃಹತ್ ಮೆಚ್ಯೂರಿಟಿ ಮೊತ್ತ ಕೂಡ 100% ತೆರಿಗೆ ಮುಕ್ತ ಯೋಜನೆಯಾಗಿದೆ !
- ಬಡವರಿಗೂ ನಿಲುಕುವ ಕನಿಷ್ಠ ಮೊತ್ತ: ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಲಕ್ಷಾಂತರ ರೂಪಾಯಿಗಳ ಅವಶ್ಯಕತೆಯಿಲ್ಲ. ಕೇವಲ ₹250 ಯಿಂದ ಖಾತೆ ತೆರೆಯಬಹುದು. ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ ₹250 ಯಿಂದ ಗರಿಷ್ಠ ₹1,50,000 ದವರೆಗೆ ನೀವು ಹಣವನ್ನು ಜಮೆ ಮಾಡಬಹುದು.
- ಹೆಣ್ಣುಮಗಳ ಭವಿಷ್ಯಕ್ಕೆ ಮಾತ್ರ ಸೀಮಿತ: ಈ ಖಾತೆಯಲ್ಲಿರುವ ಹಣವನ್ನು ಪೋಷಕರು ತಮ್ಮ ವೈಯಕ್ತಿಕ ಖರ್ಚುಗಳಿಗೆ, ವ್ಯವಹಾರಕ್ಕೆ ಅಥವಾ ಮನೆ ಕಟ್ಟಲು ಬಳಸುವಂತಿಲ್ಲ. ಕೇವಲ ಮಗಳ ಉನ್ನತ ಶಿಕ್ಷಣಕ್ಕಾಗಿ ಅಥವಾ ಆಕೆಯ ಮದುವೆಗೆ ಮಾತ್ರ ಈ ಹಣ ಬಳಕೆಯಾಗುವಂತೆ ಅತ್ಯಂತ ಕಟ್ಟುನಿಟ್ಟಿನ ಕಾನೂನು ಜಾರಿಗೆ ತಂದಿದ್ದಾರೆ .
- ಸುಲಭ ವರ್ಗಾವಣೆ ಸೌಲಭ್ಯ (Easy Transfer): ನೀವು ಭಾರತದ ಯಾವುದೇ ಕಡೆಯಲ್ಲಿದ್ದರೂ, ನಿಮ್ಮ ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿಗೆ ಅಥವಾ ಬ್ಯಾಂಕ್‌ಗೆ ಉಚಿತವಾಗಿ ಅಥವಾ ಯಾವುದೇ ತೊಂದರೆಗಳಿಲ್ಲದೆ ವರ್ಗಾಯಿಸಿಕೊಳ್ಳಬಹುದು.
ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಬೇಕಾದ ಅರ್ಹತೆಗಳು (Eligibility Criteria)
ನಿಮ್ಮ ಮುದ್ದಿನ ಮಗಳ ಹೆಸರಿನಲ್ಲಿ SSY ಖಾತೆ ತೆರೆಯಲು ಬಯಸಿದರೆ, ಈ ಕೆಳಗಿನ ಮೂಲಭೂತ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ :
- ವಯಸ್ಸಿನ ಮಿತಿ (Age Limit): ಮಗುವಿನ ಜನನದ ದಿನದಿಂದ ಹಿಡಿದು ಅವಳಿಗೆ ಸರಿಯಾಗಿ 10 ವರ್ಷ ತುಂಬುವ ಒಳಗಾಗಿ ಈ ಖಾತೆಯನ್ನು ತೆರೆಯಬೇಕು. 10 ವರ್ಷ ಮೇಲ್ಪಟ್ಟು 1 ದಿನ ಆದರೂ ಈ ಯೋಜನೆಯಡಿ ಖಾತೆ ತೆರೆಯಲು ಅವಕಾಶ ಸಿಗುವುದಿಲ್ಲ .
- ಎಷ್ಟು ಖಾತೆ ತೆರೆಯಬಹುದು?: ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ಹೆಣ್ಣುಮಕ್ಕಳಿಗೆ ಮಾತ್ರ (ಒಬ್ಬರಿಗೆ ಒಂದರಂತೆ ಎರಡು ಪ್ರತ್ಯೇಕ ಖಾತೆ) ಅವಕಾಶವಿದೆ. ಎರಡು ಅಥವಾ ಮೂರು ಹೆಣ್ಣುಮಕ್ಕಳು ಜನಿಸಿದರೆ, ಸೂಕ್ತ ವೈದ್ಯಕೀಯ ಆಧಾರ ಸಹಿತವಾಗಿ ಮೂರು ಜನರಿಗೂ ಖಾತೆ ತೆರೆಯಲು ವಿಶೇಷ ಅವಕಾಶ ಕಲ್ಪಿಸಲಾಗಿದೆ.
- ಖಾತೆ ನಿರ್ವಹಣೆ ಯಾರದು?: ಮಗುವಿಗೆ 18 ವರ್ಷ ತುಂಬುವವರೆಗೆ ತಂದೆ, ತಾಯಿ ಅಥವಾ ಕಾನೂನುಬದ್ಧ ಪೋಷಕರು (Legal Guardian) ಖಾತೆಯನ್ನು ನಿರ್ವಹಿಸುತ್ತಾರೆ. 18 ವರ್ಷದ ನಂತರ ಮಗಳೇ ಸ್ವತಃ ತನ್ನ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು ಮತ್ತು ಆ ಖಾತೆಯನ್ನು ನಿರ್ವಹಿಸಿಕೊಳ್ಳಬಹುದು .
ಖಾತೆ ತೆರೆಯಲು ಬೇಕಾಗುವ ಪ್ರಮುಖ ದಾಖಲೆಗಳು (Required Documents)
ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗೆ ಹೋಗುವ ಮುನ್ನ ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
- ಮಗುವಿನ ಜನನ ಪ್ರಮಾಣಪತ್ರ (Birth Certificate): ಮಗುವಿನ ಅತಿ ಮುಖ್ಯ ದಾಖಲೆಯಾಗಿದ್ದು, ಮುನ್ಸಿಪಾಲಿಟಿ ಅಥವಾ ನಿಮ್ಮ ಗ್ರಾಮ ಪಂಚಾಯತಿಯಿಂದ ಪಡೆದಿರಬೇಕು.
- ಪೋಷಕರ ಗುರುತಿನ ಚೀಟಿ (ID Proof): ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಪಾಸ್‌ಪೋರ್ಟ್.
- ವಿಳಾಸ ದೃಢೀಕರಣ ಪತ್ರ (Address Proof): ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಅಥವಾ ಇತ್ತೀಚಿನ ವಿದ್ಯುತ್ ಬಿಲ್.
- ಭಾವಚಿತ್ರಗಳು (Photos): ಮಗುವಿನ ಮತ್ತು ಪೋಷಕರ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳು.
ಒಂದು ಪ್ರಮುಖ ಸಲಹೆ: ಬ್ಯಾಂಕ್‌ಗೆ ಹೋಗುವ ಮುನ್ನ ದಾಖಲೆಗಳನ್ನು ಸರಿಯಾಗಿದೆಯಾ ಎಂದು ಪರಿಶೀಲಿಸಿ. ಜನನ ಪ್ರಮಾಣಪತ್ರದಲ್ಲಿ ಮಗುವಿನ ಹೆಸರಿಲ್ಲದಿದ್ದರೆ ಅಥವಾ ಆಧಾರ್ ಜೊತೆ ಹೆಸರಿನ ನಲ್ಲಿ ವ್ಯತ್ಯಾಸವಿದ್ದರೆ ಹೊಂದಾಣಿಕೆಯಾಗದಿದ್ದರೆ ಮುಂಚಿತವಾಗಿಯೇ ತಿದ್ದುಪಡಿ ಮಾಡಿಸಿಕೊಳ್ಳಿ. ಭವಿಷ್ಯದಲ್ಲಿ ಹಣ ಹಿಂಪಡೆಯುವಾಗ ದಾಖಲೆಗಳು 100% ಪಕ್ಕಾ ಇರಬೇಕು.
ಕನಿಷ್ಠ ಮತ್ತು ಗರಿಷ್ಠ ಹೂಡಿಕೆಯ ಮಿತಿ ಹಾಗೂ ದಂಡದ ನಿಯಮಗಳು
- ಕಂತು ಕಟ್ಟುವ ಅವಧಿ (Lock-in details): ಖಾತೆ ತೆರೆದ ದಿನದಿಂದ ನಿರಂತರ 15 ವರ್ಷಗಳವರೆಗೆ ಮಾತ್ರ ನೀವು ಹಣವನ್ನು ಜಮೆ ಮಾಡಬೇಕು. ಆದರೆ, ಖಾತೆಯ ಮೆಚ್ಯೂರಿಟಿ ಅವಧಿ 21 ವರ್ಷಗಳಾಗಿರುತ್ತದೆ. ಉಳಿದ 6 ವರ್ಷಗಳ ಕಾಲ ನೀವು ಹಣ ಕಟ್ಟದಿದ್ದರೂ, ನಿಮ್ಮ ಒಟ್ಟು ಖಾತೆಯ ಹಣಕ್ಕೆ ಬಡ್ಡಿ ಸೇರ್ಪಡೆಯಾಗುತ್ತಲೇ ಇರುತ್ತದೆ.
- ಖಾತೆ ನಿಷ್ಕ್ರಿಯಗೊಂಡರೆ ದಂಡ (Penalty Rules): ಹಣದ ತೊಂದರೆಯಿಂದ ಕನಿಷ್ಠ ₹250 ಕಟ್ಟಲು ಮರೆತರೆ ಖಾತೆ ‘ನಿಷ್ಕ್ರಿಯ’ (Inactive) ಆಗುತ್ತದೆ. ನಿಷ್ಕ್ರಿಯವಾದ ಪ್ರತಿ ವರ್ಷಕ್ಕೆ ಕೇವಲ ₹50 ದಂಡ (Penalty) ಮತ್ತು ಆ ವರ್ಷದ ಕನಿಷ್ಠ ಮೊತ್ತ ₹250 ಅನ್ನು ಒಟ್ಟಾಗಿ ಪಾವತಿಸುವ ಮೂಲಕ ನಿಮ್ಮ ಖಾತೆಯನ್ನು ಮತ್ತೆ ಆಕ್ಟಿವ್ ಮಾಡಿಕೊಳ್ಳಬಹುದು.
ಬಡ್ಡಿ ಲೆಕ್ಕಾಚಾರದ ಗೌಪ್ಯ ಟ್ರಿಕ್ (Interest Calculation Secret)
ಬಹಳಷ್ಟು ಪೋಷಕರಿಗೆ ಈ ನಿಯಮ ಗೊತ್ತೇ ಇಲ್ಲ! ನಿಯಮಗಳ ಪ್ರಕಾರ ಬಡ್ಡಿಯ ಲೆಕ್ಕಾಚಾರವು ಪ್ರತಿ ತಿಂಗಳ 5ನೇ ತಾರೀಖಿನಿಂದ ತಿಂಗಳಾಂತ್ಯದ ನಡುವಿನ ಖಾತೆಯ ‘ಕನಿಷ್ಠ ಬ್ಯಾಲೆನ್ಸ್’ ಮೇಲೆ ನಿರ್ಧಾರವಾಗುತ್ತದೆ. ಆದ್ದರಿಂದ ನಿಮ್ಮ ತಿಂಗಳ ಕಂತನ್ನು ಪ್ರತಿ ತಿಂಗಳ 5ನೇ ತಾರೀಖಿನ ಒಳಗಾಗಿ ಕಟ್ಟುವುದು ಉತ್ತಮ.ಒಂದು ದಿನ ತಡವಾಗಿ 6ನೇ ತಾರೀಖಿಗೆ ಕಟ್ಟಿದರೆ ಆ ಇಡೀ ತಿಂಗಳ ಬಡ್ಡಿ ನಿಮಗೆ ಸಿಗುವುದಿಲ್ಲ ಈ ವಿಷಯ ನೆನಪಿನಲ್ಲಿಡಬೇಕು !
ಆನ್‌ಲೈನ್ ಮೂಲಕ ಸುಕನ್ಯಾ ಸಮೃದ್ಧಿ ಖಾತೆಗೆ ಹಣ ಜಮೆ ಮಾಡುವ ವಿಧಾನ
ಪ್ರತಿ ತಿಂಗಳು ದಿನವಿಡೀ ಪೋಸ್ಟ್ ಆಫೀಸ್ ಕ್ಯೂನಲ್ಲಿ ನಿಲ್ಲುವ ಕಿರಿಕಿರಿ ತಪ್ಪಿಸಲು, ಆನ್‌ಲೈನ್ ಪಾವತಿ (Online Payment) ಅತ್ಯುತ್ತಮ ಮಾರ್ಗ:
- ಇಂಟರ್ನೆಟ್ ಬ್ಯಾಂಕಿಂಗ್: ನಿಮ್ಮ ಬ್ಯಾಂಕ್ ಖಾತೆಯಿಂದ ‘NEFT’ ಅಥವಾ ‘RTGS’ ಮೂಲಕ ನಿಮ್ಮ ಮಗಳ SSY ಖಾತೆಗೆ ಪ್ರತಿ ತಿಂಗಳು ಹಣ ವರ್ಗಾಯಿಸಬಹುದು. ಬ್ಯಾಂಕ್‌ನಲ್ಲಿ ಆಟೋ-ಡೆಬಿಟ್ (Auto-debit) ಸೆಟ್ ಮಾಡಿದರೆ ನೀವು ಮರೆತರೂ ಸರಿಯಾದ ದಿನಾಂಕಕ್ಕೆ ಕಂತು ಪಾವತಿಯಾಗುತ್ತದೆ.
- IPPB ಆಪ್ ಬಳಕೆ: ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ್ದರೆ, ಪ್ಲೇ-ಸ್ಟೋರ್‌ನಿಂದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಆಪ್ ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ಸಾಮಾನ್ಯ ಉಳಿತಾಯ ಖಾತೆಯಿಂದ ನೇರವಾಗಿ ಜಮೆ ಮಾಡಬಹುದು ಹಾಗೂ ನಿಮ್ಮ ಖಾತೆಯ ಬ್ಯಾಲೆನ್ಸ್ (Balance) ಕೂಡ ಚೆಕ್ ಮಾಡಬಹುದು.
- UPI ಮೂಲಕ ಪಾವತಿ: ಇತ್ತೀಚೆಗೆ ಬಹುತೇಕ ಬ್ಯಾಂಕ್‌ಗಳು UPI (Google Pay/PhonePe/Paytm) ಮೂಲಕವೂ SSY ಖಾತೆಗೆ ಹಣ ಪಾವತಿಸುವ ಆಯ್ಕೆ ಒದಗಿಸಿವೆ. ಖಾತೆ ಸಂಖ್ಯೆ ಮತ್ತು IFSC ಕೋಡ್ ಹಾಕಿ ಸುಲಭವಾಗಿ ಹಣ ಜಮೆ ಮಾಡಬಹುದು.
15 ವರ್ಷ ಹಣ ಕಟ್ಟಿ, 21ನೇ ವರ್ಷಕ್ಕೆ ಲಕ್ಷಾಧಿಪತಿಯಾಗಿ! (Investment Calculator)
ಈ ಯೋಜನೆಯಲ್ಲಿ ನೀವು ಎಷ್ಟು ಹೂಡಿಕೆ ಮಾಡಿದರೆ, ಎಷ್ಟು ಹಣ ವಾಪಸ್ ಬರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಕೆಳಗಿನ ಲೆಕ್ಕಾಚಾರ ಗಮನಿಸಿ (ಬಡ್ಡಿ ದರ 8.2% ಎಂದು ಅಂದಾಜಿಸಲಾಗಿದೆ):
- ಉದಾಹರಣೆ 1 (ದಿನಕ್ಕೆ ಕೇವಲ ₹100 ಉಳಿಸಿದರೆ): ನೀವು ಪ್ರತಿದಿನ ಕೇವಲ 100 ರೂ. ನಂತೆ ತಿಂಗಳಿಗೆ ₹3,000 (ವರ್ಷಕ್ಕೆ ₹36,000) ಹಣ ಕಟ್ಟಿದರೆ, 15 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆ ₹5,40,000 ಆಗುತ್ತದೆ. ಆದರೆ 21 ವರ್ಷಗಳ ಮೆಚ್ಯೂರಿಟಿ ನಂತರ ನಿಮ್ಮ ಮಗಳ ಕೈಸೇರುವ ಒಟ್ಟು ಮೊತ್ತ ಅಂದಾಜು ₹16,62,000 ಲಕ್ಷ ರೂ.! (ಬಡ್ಡಿಯೇ ಸುಮಾರು 11 ಲಕ್ಷ ಬರುತ್ತದೆ).
- ಉದಾಹರಣೆ 2 (ತಿಂಗಳಿಗೆ ₹5,000 ಹೂಡಿಕೆ): ನೀವು ಪ್ರತಿ ತಿಂಗಳು ₹5,000 (ವರ್ಷಕ್ಕೆ ₹60,000) ದಂತೆ 15 ವರ್ಷ ಹಣ ಕಟ್ಟಿದರೆ, ಒಟ್ಟು ₹9,00,000 ಹೂಡಿಕೆ ಮಾಡುತ್ತೀರಿ. 21 ವರ್ಷಗಳ ನಂತರ ನಿಮಗೆ ಸಿಗುವ ಒಟ್ಟು ಮೊತ್ತ ಅಂದಾಜು ₹27,71,031.
- ಉದಾಹರಣೆ 3 (ಗರಿಷ್ಠ ಹೂಡಿಕೆ ₹1.5 ಲಕ್ಷ): ನೀವು ಪ್ರತಿ ವರ್ಷ ಗರಿಷ್ಠ ಮಿತಿಯಾದ ₹1,50,000 (ತಿಂಗಳಿಗೆ ₹12,500) ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ ನಿಮ್ಮ ಹೂಡಿಕೆ ₹22,50,000 ಆಗುತ್ತದೆ. ಮೆಚ್ಯೂರಿಟಿ ಸಮಯದಲ್ಲಿ ನಿಮ್ಮ ಮಗಳಿಗೆ ಸಿಗುವ ಬೃಹತ್ ಮೊತ್ತ ಅಂದಾಜು ₹69,27,578! (ಸುಮಾರು 70 ಲಕ್ಷ ರೂಪಾಯಿಗಳು).
ಅವಧಿಗೂ ಮುನ್ನ ಹಣ ಹಿಂಪಡೆಯುವ ಮತ್ತು ಮೆಚ್ಯೂರಿಟಿ ನಿಯಮಗಳು (Withdrawal Rules)
ಈ ಯೋಜನೆಯಲ್ಲಿ ಹಣ ಹಾಕಲು ಎಷ್ಟು ಸುಲಭವೋ, ತೆಗೆಯುವುದಕ್ಕೂ ಅಷ್ಟೇ ಕಾನೂನಿನ ಕಟ್ಟುನಿಟ್ಟಾದ ಕ್ರಮಗಳಿವೆ , ಆದರೆ ಒಂದು ಹೆಣ್ಣು ಮಗುವಿನ ಭವಿಷ್ಯಕ್ಕೆ ಪೂರಕವಾದ ನಿಯಮಗಳಿವೆ:
- ಶಿಕ್ಷಣಕ್ಕಾಗಿ ಭಾಗಶಃ ಹಿಂಪಡೆಯುವಿಕೆ (Partial Withdrawal): ಮಗುವಿಗೆ 18 ವರ್ಷ ತುಂಬಿದ ನಂತರ ಅಥವಾ ಆಕೆ 10ನೇ ತರಗತಿ ಪಾಸಾದ ಬಳಿಕ, ಆಕೆಯ ಉನ್ನತ ವ್ಯಾಸಂಗಕ್ಕಾಗಿ (ಪಿಯುಸಿ, ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್) ನಿಮ್ಮ ಖಾತೆಯಲ್ಲಿರುವ ಒಟ್ಟು ಮೊತ್ತದ ಶೇಕಡಾ 50 ರಷ್ಟು (50%) ಹಣವನ್ನು ಹಿಂಪಡೆಯಲು ಅವಕಾಶವಿದೆ. ಇದಕ್ಕೆ ನೀವು ಕಾಲೇಜಿನ ಪ್ರವೇಶಾತಿ ಶುಲ್ಕದ ರಶೀದಿ (Fee receipt) ಒದಗಿಸುವುದು ಕಡ್ಡಾಯವಾಗಿದೆ .
- ಸಂಪೂರ್ಣ ಮೆಚ್ಯೂರಿಟಿ (Full Maturity): ಖಾತೆ ತೆರೆದು 21 ವರ್ಷಗಳು ಪೂರ್ಣಗೊಂಡ ನಂತರ ಖಾತೆಯು ಸಂಪೂರ್ಣವಾಗಿ ಮೆಚ್ಯೂರ್ ಆಗುತ್ತದೆ. ಆಗ ಅಸಲು ಮತ್ತು ಒಟ್ಟು ಬಡ್ಡಿಯ ಸಮೇತ ಪೂರ್ತಿ ಹಣ ಹೆಣ್ಣು ಮಗುವಿಗೆ ಸೇರುತ್ತದೆ.
- ಮದುವೆಯ ಸಂದರ್ಭದಲ್ಲಿ ವಿತ್‌ಡ್ರಾಲ್: ಮಗಳಿಗೆ 18 ವರ್ಷ ತುಂಬಿದ್ದು, 21 ವರ್ಷದ ಮೆಚ್ಯೂರಿಟಿ ಅವಧಿಗೂ ಮುನ್ನವೇ ಮದುವೆ ನಿಶ್ಚಯವಾದರೆ, ಖಾತೆಯನ್ನು ಅವಧಿಗೂ ಮುನ್ನವೇ ಮುಚ್ಚಲು ಅವಕಾಶವಿದೆ. ಮದುವೆಗೆ 1 ತಿಂಗಳು ಮುಂಚೆ ಅಥವಾ ಮದುವೆಯಾದ 3 ತಿಂಗಳ ಒಳಗೆ ಅರ್ಜಿ ಸಲ್ಲಿಸಬಹುದು.
ವಿಶೇಷ ಸಂದರ್ಭದಲ್ಲಿ ಖಾತೆ ಮುಚ್ಚಬಹುದೇ? (Premature Closure)
ಸಾಮಾನ್ಯವಾಗಿ ಈ ಖಾತೆಯನ್ನು 21 ವರ್ಷಗಳ ಮುನ್ನ ಮುಚ್ಚಲು ಬರುವುದಿಲ್ಲ. ಆದರೆ, ಕೆಲವು ಅತ್ಯಂತ ತುರ್ತು ಸಂದರ್ಭಗಳಲ್ಲಿ ಮಾತ್ರ ಸರಿಯಾದ ದಾಖಲೆಗಳನ್ನು ಕೊಟ್ಟರೆ ಮಾತ್ರ ಅವಕಾಶವಿದೆ ಇದೆ:
- ಆರೋಗ್ಯದ ಸಮಸ್ಯೆ: ಖಾತೆ ಹೊಂದಿರುವ ಹೆಣ್ಣುಮಗುವಿಗೆ ಯಾವುದಾದರೂ ಗಂಭೀರವಾದ ಅಥವಾ ಪ್ರಾಣಾಂತಿಕ ಕಾಯಿಲೆ ಬಂದರೆ, ಚಿಕಿತ್ಸೆಯ ವೆಚ್ಚಕ್ಕಾಗಿ ಖಾತೆಯನ್ನು ಮುಚ್ಚಿ ಹಣ ಪಡೆಯಬಹುದು.
- ಪೋಷಕರ ನಿಧನ: ಖಾತೆಯನ್ನು ನಿರ್ವಹಿಸುತ್ತಿರುವ ಪೋಷಕರು (Guardian) ಮರಣಹೊಂದಿದರೆ, ಕಂತುಗಳನ್ನು ಮುಂದುವರಿಸಲು ಸಾಧ್ಯವಾಗದ ಕಾರಣ ಖಾತೆಯನ್ನು ಮುಚ್ಚಿ ಒಟ್ಟು ಅಸಲು ಮತ್ತು ಬಡ್ಡಿಯ ಮೊತ್ತವನ್ನು ನೀಡಲಾಗುತ್ತದೆ.
- ಸಾಲ ಸೌಲಭ್ಯವಿದೆಯೇ?: ಬಹಳಷ್ಟು ಜನರಿಗೆ ಕಾಡುವ ಪ್ರಶ್ನೆ ಇದು. ಈ ಯೋಜನೆಯಲ್ಲಿ ಯಾವುದೇ ರೀತಿಯ ಸಾಲ (Loan) ಸೌಲಭ್ಯ ಇರುವುದಿಲ್ಲ. ಈ ಹಣ ಕೇವಲ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಮತ್ತು ಅವಳ ಶಿಕ್ಷಣಕ್ಕಾಗಿ ಅವಳ ಜೀವನ ರೂಪಿಸುವುದಕ್ಕಾಗಿ ಮಾತ್ರ ಮೀಸಲು.
ಸುಕನ್ಯಾ ಸಮೃದ್ಧಿ ಯೋಜನೆ (SSY) ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ನಡುವಿನ ವ್ಯತ್ಯಾಸ
ಸಾಮಾನ್ಯ ಜನರಿಗೆ ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂಬ ಗೊಂದಲವಿರುತ್ತದೆ. ಒಂದು ಸಣ್ಣ ಹೋಲಿಕೆ ಇಲ್ಲಿದೆ:
- ಬಡ್ಡಿ ದರ: PPF ನಲ್ಲಿ ಪ್ರಸ್ತುತ 7.1% ಬಡ್ಡಿ ಇದ್ದರೆ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 8.2% ಬಡ್ಡಿ ಲಭ್ಯವಿದೆ.
- ಖಾತೆದಾರರು: PPF ಅನ್ನು ಭಾರತದ ಯಾವುದೇ ನಾಗರಿಕರು ತೆರೆಯಬಹುದು. ಆದರೆ SSY ಕೇವಲ 10 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಮಾತ್ರ.
- ಮೆಚ್ಯೂರಿಟಿ ಅವಧಿ: PPF ಖಾತೆಯು 15 ವರ್ಷಗಳಿಗೆ ಮೆಚ್ಯೂರ್ ಆಗುತ್ತದೆ (ನಂತರ 5 ವರ್ಷ ವಿಸ್ತರಿಸಬಹುದು). ಆದರೆ SSY ಖಾತೆಯು 21 ವರ್ಷಗಳವರೆಗೆ ಲಾಕ್ ಆಗಿರುತ್ತದೆ.
ತಜ್ಞರ ಸಲಹೆ: ನಿಮ್ಮ ಮನೆಯಲ್ಲಿ ಹೆಣ್ಣು ಮಗುವಿದ್ದರೆ, PPF ಗಿಂತ ಸುಕನ್ಯಾ ಸಮೃದ್ಧಿ ಯೋಜನೆಯೇ ನೂರಕ್ಕೆ ನೂರು ಹೆಚ್ಚು ಉಪಯುಕ್ತ ಅತ್ಯುತ್ತಮ ಆಯ್ಕೆಯಾಗಿದೆ.
‘‘ ಗೃಹಲಕ್ಷ್ಮಿ ‘ ಯೋಜನೆಯ ಹಣದಿಂದ ಮಗಳ ಭವಿಷ್ಯ ನಿರ್ಮಾಣ! (ಒಂದು ಅತ್ಯದ್ಭುತ ಸ್ಮಾರ್ಟ್ ಐಡಿಯಾ)
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ ‘ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ನೇರವಾಗಿ ಬ್ಯಾಂಕ್ ಖಾತೆಗೆ ₹2,000 ಹಣ ಜಮೆಯಾಗುತ್ತಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ನೀಡುತ್ತಿರುವ ಈ ಹಣವನ್ನು ಕೇವಲ ದಿನನಿತ್ಯದ ಮನೆ ಖರ್ಚು ಮತ್ತು ಸಣ್ಣಪುಟ್ಟ ಖರ್ಚುಗಳಿಗೆ ಬಳಸುವ ಬದಲು, ನಿಮ್ಮ ಮನೆಯಲ್ಲಿ 10 ವರ್ಷದೊಳಗಿನ ಹೆಣ್ಣುಮಗಳಿದ್ದರೆ, ಆಕೆಯ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆಗೆದು ಅದರಲ್ಲಿ ಹೂಡಿಕೆ ಮಾಡುವುದು ಅತ್ಯಂತ ಬುದ್ಧಿವಂತಿಕೆ ಮತ್ತು ದೂರದೃಷ್ಟಿಯ ನಿರ್ಧಾರವಾಗಿದೆ.
ತಾಯಿಯೇ ಮಗಳ ಭವಿಷ್ಯದ ರೂವಾರಿ (ಒಂದು ರೂಪಾಯಿ ಖರ್ಚಿಲ್ಲದೆ ಲಕ್ಷಾಧಿಪತಿ)
ಸಾಮಾನ್ಯವಾಗಿ ಮಧ್ಯಮ ವರ್ಗದ ಅಥವಾ ಅತಿ ಕಡು ಬಡತನ ಕುಟುಂಬಗಳಲ್ಲಿ ತಿಂಗಳಿಗೆ ಎರಡು ಸಾವಿರ ರೂಪಾಯಿ ಉಳಿಸುವುದು ಕಷ್ಟದ ಕೆಲಸ. ಆದರೆ ಗೃಹಲಕ್ಷ್ಮಿ ಯೋಜನೆಯಿಂದ ಬರುವ ಹಣವನ್ನು ನೇರವಾಗಿ ಮಗಳ ಖಾತೆಗೆ ವರ್ಗಾಯಿಸಿದರೆ ಏನಾಗುತ್ತದೆ ಎಂಬ ಲೆಕ್ಕಾಚಾರ ನೋಡಿ:
- ಲೆಕ್ಕಾಚಾರ 1 (ಪೂರ್ತಿ ₹2,000 ಹೂಡಿಕೆ): ತಾಯಿಯ ಖಾತೆಗೆ ಬರುವ ಗೃಹಲಕ್ಷ್ಮಿ ಯೋಜನೆಯ ಪೂರ್ತಿ ₹2,000 ಹಣವನ್ನು (ವರ್ಷಕ್ಕೆ ₹24,000) ಮಗಳ SSY ಖಾತೆಗೆ ಪ್ರತಿ ತಿಂಗಳು ಜಮೆ ಮಾಡುತ್ತಾ ಬಂದರೆ, 15 ವರ್ಷಗಳಲ್ಲಿ ಸರ್ಕಾರದಿಂದ ಬಂದ ₹3,60,000 ಹಣ ಹೂಡಿಕೆಯಾಗುತ್ತದೆ. ಮಗಳಿಗೆ 21 ವರ್ಷ ತುಂಬಿದಾಗ ಬರೋಬ್ಬರಿ ₹11 ಲಕ್ಷಕ್ಕೂ ಅಧಿಕ (ಅಂದಾಜು ₹11,08,412) ಬೃಹತ್ ಮೊತ್ತ ಕೈಸೇರುತ್ತದೆ!
- ಲೆಕ್ಕಾಚಾರ 2 (ಅರ್ಧ ಹಣ ₹1,000 ಹೂಡಿಕೆ): ಒಂದು ವೇಳೆ ₹1,000 ಹಣವನ್ನು ಮನೆ ಖರ್ಚಿಗೆ ಬಳಸಿ, ಕೇವಲ ಉಳಿದ ₹1,000 ಹಣವನ್ನು ಮಗಳ ಹೆಸರಿನಲ್ಲಿ ಹೂಡಿಕೆ ಮಾಡಿದರೂ (ವರ್ಷಕ್ಕೆ ₹12,000), 21 ವರ್ಷಗಳ ನಂತರ ಮಗಳ ವಿದ್ಯಾಭ್ಯಾಸಕ್ಕೆ ₹5.5 ಲಕ್ಷಕ್ಕೂ ಹೆಚ್ಚು (ಅಂದಾಜು ₹5,54,206) ಹಣ ಸಿಗುತ್ತದೆ.
ಈ ತಂತ್ರವನ್ನು ಕಾರ್ಯಗತ ಮಾಡುವುದು ಹೇಗೆ?
ಇದಕ್ಕಾಗಿ ನೀವು ಅಂಚೆ ಕಚೇರಿ ಅಥವಾ ಬ್ಯಾಂಕ್‌ಗೆ ಓಡಾಡುವಂತಿಲ್ಲ . ಗೃಹಲಕ್ಷ್ಮಿ ಹಣ ಬೀಳುವ ನಿಮ್ಮ ಬ್ಯಾಂಕ್ ಖಾತೆಗೆ ಮಗಳ ಸುಕನ್ಯಾ ಸಮೃದ್ಧಿ ಖಾತೆಯನ್ನು ಲಿಂಕ್ ಮಾಡಿ. ಪ್ರತಿ ತಿಂಗಳ 5ನೇ ತಾರೀಖಿನ ಒಳಗಾಗಿ ನಿಮ್ಮ ಫೋನ್-ಪೇ (PhonePe), ಗೂಗಲ್-ಪೇ (GPay) ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮನೆಯಲ್ಲೇ ಕುಳಿತು ಹಣ ನಿಮ್ಮ ಮಗಳ ಖಾತೆಗೆ ವರ್ಗಾಯಿಸಬಹುದು.ಅಥವಾ ಬ್ಯಾಂಕ್‌ನಲ್ಲಿ ಒಮ್ಮೆ ಆಟೋ-ಡೆಬಿಟ್ (Auto-debit) ವ್ಯವಸ್ಥೆ ಮಾಡಿದರೆ, ಗೃಹಲಕ್ಷ್ಮಿ ಹಣ ಬಂದ ತಕ್ಷಣ ಅದರಲ್ಲಿರುವ ಒಂದಿಷ್ಟು ಮೊತ್ತ ಮಗಳ ಭವಿಷ್ಯ ಕೆ ಉಳಿಸುವ ಹಾಗೆ ತಾನಾಗಿಯೇ ಜಮೆಯಾಗುತ್ತದೆ.
ನಿಮ್ಮ ಸ್ವಂತ ಜೇಬಿನಿಂದ, ನಿಮ್ಮ ಕಷ್ಟದ ದುಡಿಮೆಯಿಂದ ಒಂದು ರೂಪಾಯಿ ಕೂಡ ಖರ್ಚಾಗದೆ ಬುದ್ಧಿವಂತಿಕೆಯಿಂದ , ಕೇವಲ ರಾಜ್ಯ ಸರ್ಕಾರದ ಆರ್ಥಿಕ ನೆರವಿನಿಂದಲೇ ಮಗಳ ಭವಿಷ್ಯ ಸಂಪೂರ್ಣವಾಗಿ ಭದ್ರವಾಗುತ್ತದೆ. ಅಕ್ಷರಶಃ ಒಬ್ಬ ತಾಯಿಯೇ ತನ್ನ ಮಗಳ ಉಜ್ವಲ ಭವಿಷ್ಯವನ್ನು ಬರೆಯಲು ಇದೊಂದು ಅತ್ಯಂತ ಸುವರ್ಣಾವಕಾಶ!
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)
1. ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಸ್ತುತ ಬಡ್ಡಿ ದರ ಎಷ್ಟು? ಪ್ರಸ್ತುತ ಈ ಯೋಜನೆಗೆ ವಾರ್ಷಿಕ 8.2% ಬಡ್ಡಿ ದರವನ್ನು ನೀಡಲಾಗುತ್ತಿದ್ದು, ಇದು ಕೇಂದ್ರ ಸರ್ಕಾರದಿಂದ ತ್ರೈಮಾಸಿಕವಾಗಿ (ಪ್ರತಿ 3 ತಿಂಗಳಿಗೊಮ್ಮೆ) ಪರಿಷ್ಕರಣೆಗೊಳ್ಳುತ್ತದೆ.
2. 10 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಈ ಖಾತೆ ತೆರೆಯಬಹುದೇ? ಖಂಡಿತಾ ಇಲ್ಲ. ಸರ್ಕಾರದ ಕಟ್ಟುನಿಟ್ಟಿನ ನಿಯಮದ ಪ್ರಕಾರ ಮಗುವಿನ ವಯಸ್ಸು 10 ವರ್ಷ ಮೀರುವ ಮುನ್ನವೇ (ಅಂದರೆ 10ನೇ ಹುಟ್ಟುಹಬ್ಬದ ಒಳಗೆ) ಈ ಖಾತೆಯನ್ನು ತೆರೆಯುವುದು ಕಡ್ಡಾಯವಾಗಿದೆ.
3. ತಿಂಗಳ ಕಂತು ಕಟ್ಟಲು ಸಾಧ್ಯವಾಗದಿದ್ದರೆ ಖಾತೆ ಕ್ಯಾನ್ಸಲ್ ಆಗುತ್ತಾ? ಇಲ್ಲ, ಖಾತೆ ಕ್ಯಾನ್ಸಲ್ ಆಗುವುದಿಲ್ಲ. ಕೇವಲ 50 ರೂ. ವಾರ್ಷಿಕ ದಂಡ (Penalty) ಕಟ್ಟಿ, ಬಾಕಿ ಇರುವ ಕನಿಷ್ಠ ಮೊತ್ತವನ್ನು (250 ರೂ.) ಪಾವತಿಸುವ ಮೂಲಕ ನಿಮ್ಮ ಖಾತೆಯನ್ನು ಮತ್ತೆ ಆಕ್ಟಿವ್ ಮಾಡಿಕೊಳ್ಳಬಹುದು.
4. ಮೆಚ್ಯೂರಿಟಿ ಆದಾಗ ಸಿಗುವ ಹಣಕ್ಕೆ ಟ್ಯಾಕ್ಸ್ ಕಟ್ಟಬೇಕಾ? ಇಲ್ಲ, ಈ ಯೋಜನೆಯು 80C ಅಡಿಯಲ್ಲಿ ‘EEE’ (Exempt-Exempt-Exempt) ವಿಭಾಗಕ್ಕೆ ಸೇರಿದ್ದು, ನೀವು ಕಟ್ಟಿದ ಅಸಲು, ಗಳಿಸಿದ ಬಡ್ಡಿ ಮತ್ತು ಕೊನೆಯಲ್ಲಿ ಕೈಸೇರುವ ಒಟ್ಟು ಮೆಚ್ಯೂರಿಟಿ ಮೊತ್ತಕ್ಕೆ 100% ಸಂಪೂರ್ಣ ತೆರಿಗೆ ವಿನಾಯಿತಿ ಇದೆ.
1 thought on “ಹೆಣ್ಣು ಮಕ್ಕಳಿದ್ದಾರೆ ಪಡೆಯಿರಿ ₹15 ಲಕ್ಷ ಸರ್ಕಾರದ ಗ್ಯಾರಂಟಿ! ‘ಸುಕನ್ಯಾ ಸಮೃದ್ಧಿ ಯೋಜನೆ’ಯಲ್ಲಿ!”