ಪ್ರಧಾನ ಮಂತ್ರಿ ಆವಾಸ್ ಯೋಜನೆಯು (PM Awas Yojana)ಸ್ವಂತ ಮನೆ ಇಲ್ಲದವರಿಗೆ ಹಾಗೂ ಆರ್ಥಿಕವಾಗಿ ಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರ ಸಹಾಯ ಮಾಡೋ ಯೋಜನೆಯಾಗಿದೆ. ಈ”
ಪ್ರಧಾನ ಮಂತ್ರಿ ಆವಾಸ್ ಯೋಜನೆ”ಯ ಮೂಲಕ ಮನೆ ಕಟ್ಟಲು ಅಥವಾ ಮನೆ ಖರೀದಿಸಲು ಸರ್ಕಾರದಿಂದ ಸಬ್ಸಿಡಿ ಕೊಡಲಾಗುತ್ತದೆ. ನಗರದಲ್ಲಿರುವವರು ಅಥವಾ ಗ್ರಾಮದಲ್ಲಿರುವವರು ತಮ್ಮ ಅರ್ಹತೆಯ ಪ್ರಕಾರ ಈ ಯೋಜನೆಗೆ ಅರ್ಜಿ ಹಾಕಬಹುದು. ಯಾರು ಯಾವಾಗ ಅರ್ಜಿ ಹಾಕಬಹುದು, ಎಷ್ಟು ಹಣದ ಸಹಾಯ ಸಿಗಬಹುದು, ಅರ್ಜಿ ಹೇಗೆ ಹಾಕಬೇಕು, ಯಾವ ದಾಖಲೆ ಬೇಕು ಅನ್ನೋದನ್ನ ಈ ಲೇಖನದಲ್ಲಿ ಸರಳವಾಗಿ ತಿಳಿಸಲಾಗಿದೆ.

ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಜೀವನದಲ್ಲಿ ಒಂದು ಸ್ವಂತ ಮನೆ ಕಟ್ಟುವ ಬಹುದೊಡ್ಡ ಕನಸಿರುತ್ತದೆ. “ಸ್ವಂತ ಮನೆ” ಎನ್ನುವುದು ಕೇವಲ ಇಟ್ಟಿಗೆ, ಸಿಮೆಂಟ್‌ಗಳಿಂದ ಕಟ್ಟಿದ ಗೋಡೆಯಲ್ಲ, ಬದಲಾಗಿ ಅದೊಂದು ಕುಟುಂಬದ ಸ್ವಾಭಿಮಾನ, ನೆಮ್ಮದಿ ಮತ್ತು ಭವಿಷ್ಯದ ಭದ್ರತೆಯ ಸಂಕೇತವಾಗಿದೆ. ಆದರೆ ಇಂದಿನ ದುಬಾರಿ ಕಾಲದಲ್ಲಿ ಗಗನಕ್ಕೇರಿರುವ ಜಾಗದ ಬೆಲೆ, ಸಿಮೆಂಟ್, ಕಬ್ಬಿಣ ಹಾಗೂ ಕೂಲಿ ವೆಚ್ಚವನ್ನು ನೋಡಿದರೆ, ಬಡ ಕುಟುಂಬದವರು ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಕಟ್ಟುವುದು ಬರಿ ಕನಸು ಆಗಿ ಉಳಿದಿದೆ.ದುಡಿದ ಹಣವೆಲ್ಲಾ ಬಾಡಿಗೆ ಕಟ್ಟಲು ಸಾಕಾಗುತ್ತಿದ್ದು, ಸ್ವಂತ ಮನೆಗಾಗಿ ಬಂಡವಾಳ ಹೂಡುವುದು ಸಾಮಾನ್ಯ ಜನರು ಅಸಾಧ್ಯದ ಮಾತಾಗಿದೆ.
ದೇಶದ ಪ್ರತಿಯೊಬ್ಬ ಬಡ ಹಾಗೂ ವಸತಿ ರಹಿತ ನಾಗರಿಕನಿಗೂ ಗೌರವಯುತವಾದ ಸ್ವಂತ ಮನೆ ಸಿಗಬೇಕು ಎಂಬ ಮಹತ್ವಾಕಾಂಕ್ಷಿ ಉದ್ದೇಶದಿಂದ ಭಾರತ ಸರ್ಕಾರವು ಜಾರಿಗೆ ತಂದಿರುವ ಅತ್ಯಂತ ಜನಪ್ರಿಯ ಮತ್ತು ಬೃಹತ್ ವಸತಿ ಯೋಜನೆಯೇ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ (Pradhan Mantri Awas Yojana – PMAY). “2022ರ ವೇಳೆಗೆ ಎಲ್ಲರಿಗೂ ಮನೆ” (Housing for All) ಎಂಬ ಘೋಷಣೆಯೊಂದಿಗೆ ಆರಂಭವಾದ ಈ ಯೋಜನೆಯನ್ನು ಸರ್ಕಾರವು ಪ್ರಸ್ತುತ ಹೊಸ ನಿಯಮಗಳು ಮತ್ತು ಹೆಚ್ಚಿನ ಬಜೆಟ್‌ನೊಂದಿಗೆ ವಿಸ್ತರಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಸರ್ಕಾರವು ಗ್ರಾಮೀಣ ಭಾಗದ ಬಡವರಿಗೆ ನೇರವಾಗಿ ಅವರ ಅನುಕೂಲಕ್ಕೆ ತಕ್ಕಂತೆ ಉಚಿತ ಮನೆ ಕಟ್ಟಿಕೊಳ್ಳಲು ಲಕ್ಷಾಂತರ ರೂಪಾಯಿಗಳ ಧನಸಹಾಯ ನೀಡುತ್ತದೆ. ಹಾಗೆಯೇ ಗ್ರಾಮೀಣ ಪ್ರದೇಶದಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಖರೀದಿಸಲು ಅಥವಾ ಅವರ ಕನಸಿನ ಮನೆ ಕಟ್ಟಿಕೊಳ್ಳಲು ಬ್ಯಾಂಕ್ ಸಾಲದ ಮೇಲೆ ಭಾರಿ ಮೊತ್ತದ ಸಬ್ಸಿಡಿಯನ್ನು ( Subsidy) ನೀಡುತ್ತದೆ. ಆದರೆ ಬಹಳಷ್ಟು ಜನರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಗೆ ಅರ್ಜಿ ಸಲ್ಲಿಸುವುದು ಹೇಗೆ? ಗ್ರಾಮೀಣ ಮತ್ತು ನಗರ ಪ್ರದೇಶಗಳ ನಿಯಮಗಳ ನಡುವಿನ ವ್ಯತ್ಯಾಸವೇನು? ಮತ್ತು ಖಾತೆಗೆ ಹಣ ಬರಲು ಯಾವೆಲ್ಲಾ ದಾಖಲೆಗಳು ಬೇಕು ಎಂಬ ಸರಿಯಾದ ಮಾಹಿತಿ ತಿಳಿದಿರುವುದಿಲ್ಲ. ಮಧ್ಯವರ್ತಿಗಳ ಮಾತು ಕೇಳಿ ಹಣ ಕಳೆದುಕೊಳ್ಳುವ ಬದಲು, ಈ ಯೋಜನೆಯ ಪ್ರತಿಯೊಂದು ನಿಯಮ, ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆಯ ಕುರಿತಾದ ಮಾಹಿತಿಯನ್ನು ಈ ಸುದೀರ್ಘ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿರುವ ಎರಡು ಪ್ರಮುಖ ವಿಭಾಗಗಳು
ಗ್ರಾಹಕರು ಮತ್ತು ಓದುಗರು ಮೊದಲು ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ದೇಶದ ಭೌಗೋಳಿಕ ಸ್ಥಿತಿಗೆ ಅನುಗುಣವಾಗಿ ಎರಡು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಲಾಗಿದೆ. ಇವೆರಡರ ನಿಯಮಗಳು ಮತ್ತು ಸೌಲಭ್ಯಗಳು ವಿಭಿನ್ನವಾಗಿವೆ:
1. ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (PMAY-Gramin / PMAY-G)
ಈ ಯೋಜನೆಯು ಸಂಪೂರ್ಣವಾಗಿ ಹಳ್ಳಿಗಳಲ್ಲಿ ಅಥವಾ ಗ್ರಾಮೀಣ ಭಾಗದಲ್ಲಿ ವಾಸಿಸುವ ಅತ್ಯಂತ ಬಡಜನರ ಕುಟುಂಬಕ್ಕೆ ಮತ್ತು ವಸತಿ ರಹಿತ ಅಥವಾ ಕಚ್ಚಾ ಮನೆಗಳಲ್ಲಿ (ಮಣ್ಣಿನ ಅಥವಾ ಹೆಂಚಿನ ಸಣ್ಣ ಮನೆ ) ವಾಸಿಸುವ ಕುಟುಂಬಗಳಿಗಾಗಿ ಮೀಸಲಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ನಿರ್ವಹಿಸುತ್ತದೆ.
2. ಪ್ರಧಾನ ಮಂತ್ರಿ ಆವಾಸ್ ಯೋಜನೆ – ನಗರ (PMAY-Urban / PMAY-U)
ಪ್ರಧಾನ ಮಂತ್ರಿ ಆವಾಸ್ ಯೋಜನೆ – ನಗರ ಯೋಜನೆಯು ಪಟ್ಟಣಗಳು, ಪುರಸಭೆಗಳು ಮತ್ತು ಮೆಟ್ರೋ ನಗರ ಪ್ರದೇಶಗಳಲ್ಲಿ ವಾಸಿಸುವ ಬಡ ಜನರಿಗೆ ಹಾಗೂ ಮಧ್ಯಮ ವರ್ಗದ ಜನರಿಗಾಗಿ ಜಾರಿಗೆ ತಂದಿದ್ದಾರೆ . ನಗರಗಳಲ್ಲಿ ಸ್ವಂತ ಸೈಟ್ ಹೊಂದಿದ್ದು ಮನೆ ಕಟ್ಟಿಕೊಳ್ಳುವವರಿಗೆ ಅಥವಾ ಹೊಸದಾಗಿ ಫ್ಲಾಟ್/ಅಪಾರ್ಟ್‌ಮೆಂಟ್ ಖರೀದಿಸುವವರಿಗೆ ಬ್ಯಾಂಕ್ ಸಾಲದ ಬಡ್ಡಿಯ ಮೇಲೆ ರಿಯಾಯಿತಿ ನೀಡಲು ಈ ವಿಭಾಗವನ್ನು ಬಳಸಲಾಗುತ್ತದೆ. ಇದನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರಮುಖವಾಗಿ ನೋಡಿಕೊಳ್ಳುತ್ತದೆ.
PMAY ಗ್ರಾಮೀಣ ಯೋಜನೆಯ ಲಾಭಗಳು ಮತ್ತು ಆರ್ಥಿಕ ನೆರವು
ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಅರ್ಹ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರವು ಹಂತ-ಹಂತವಾಗಿ ನೇರವಾಗಿ ಅವರ ಬ್ಯಾಂಕ್ ಖಾತೆಯ ಮೂಲಕ ಹಣವನ್ನು ಜಮಾ ಮಾಡುತ್ತದೆ:
- ಮೈದಾನ ಪ್ರದೇಶಗಳು (Plain Areas): ಸಾಮಾನ್ಯ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ₹1,20,000 ರೂ.ಗಳ (ಒಂದು ಲಕ್ಷದ ಇಪ್ಪತ್ತು ಸಾವಿರ) ನೇರ ಧನಸಹಾಯ ಸಿಗುತ್ತದೆ.
- ಗುಡ್ಡಗಾಡು ಮತ್ತು ನಕ್ಸಲ್ ಪೀಡಿತ ಪ್ರದೇಶಗಳು: ಕಠಿಣ ಭೂಪ್ರದೇಶ ಹೊಂದಿರುವ ಜಾಗಗಳಲ್ಲಿ ಮನೆ ನಿರ್ಮಾಣಕ್ಕಾಗಿ ₹1,30,000 ರೂ. ನೆರವು ನೀಡಲಾಗುತ್ತದೆ.
- ಉದ್ಯೋಗ ಖಾತರಿ ಯೋಜನೆ ನೆರವು (MGNREGA): ಮನೆ ಕಟ್ಟುವಾಗ ಫಲಾನುಭವಿಯು ಸ್ವತಃ ಕೂಲಿ ಕೆಲಸ ಮಾಡಲು ‘ಮನರೇಗಾ’ ಯೋಜನೆಯಡಿ 90 ರಿಂದ 95 ದಿನಗಳ ದಿನಗೂಲಿ ಹಣವನ್ನು (ಅಂದಾಜು ₹25,000 ಕ್ಕಿಂತ ಹೆಚ್ಚು) ಹೆಚ್ಚುವರಿಯಾಗಿ ಹಣ ಪಡೆಯಬಹುದು.
- ಶೌಚಾಲಯ ನಿರ್ಮಾಣದ ಹಣ: ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಮನೆಯಲ್ಲಿ ಒಂದು ಶೌಚಾಲಯ ಕಟ್ಟಿಕೊಳ್ಳಲು ಹೆಚ್ಚುವರಿಯಾಗಿ ₹12,000 ರೂ. ಗಳ ಧನಸಹಾಯವೂ ಸಿಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಹಳ್ಳಿಯಲ್ಲಿ ಒಂದು ಸುಂದರವಾದ ಕನಸಿನ ಮನೆ ನಿರ್ಮಿಸಲು ಗ್ರಾಹಕನಿಗೆ ಸರಿಸುಮಾರು ₹1.5 ಲಕ್ಷಕ್ಕೂ ಅಧಿಕ ಮೊತ್ತದ ಆರ್ಥಿಕ ನೆರವು ಸಂಪೂರ್ಣ ಉಚಿತವಾಗಿ ಸಿಗುತ್ತದೆ.
PMAY ನಗರ ಯೋಜನೆಯ ಲಾಭಗಳು ಮತ್ತು ಸಬ್ಸಿಡಿ ಲೆಕ್ಕಾಚಾರ (CLSS)
ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಅವರ ವಾರ್ಷಿಕ ಆದಾಯದ ಆಧಾರದ ಮೇಲೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ (CLSS) ಯೋಜನೆಯಡಿ ಹೋಮ್ ಲೋನ್ (Home Loan) ಬಡ್ಡಿಯ ಮೇಲೆ ರಿಯಾಯಿತಿ ಸಿಗುತ್ತದೆ. ಇದನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ:
- EWS (ಆರ್ಥಿಕವಾಗಿ ಹಿಂದುಳಿದವರು): ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷದ ಒಳಗಿದ್ದರೆ, ಇವರಿಗೆ ₹6 ಲಕ್ಷದವರೆಗಿನ ಹೋಮ್ ಲೋನ್ ಮೇಲೆ ಶೇ. 6.5% ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತದೆ. ಇದರಿಂದ ಗರಿಷ್ಠ ₹2.67 ಲಕ್ಷ ರೂ. ಗಳ ಒಟ್ಟು ಲಾಭ ಸಿಗುತ್ತದೆ.
- LIG (ಕಡಿಮೆ ಆದಾಯದ ಗುಂಪು): ವಾರ್ಷಿಕ ಆದಾಯ ₹3 ಲಕ್ಷದಿಂದ ₹6 ಲಕ್ಷದ ಒಳಗಿರುವ ಕುಟುಂಬಗಳು ಈ ವರ್ಗಕ್ಕೆ ಬರುತ್ತಾರೆ. ಇವರಿಗೂ ₹6 ಲಕ್ಷದವರೆಗಿನ ಸಾಲದ ಮೇಲೆ ಶೇ. 6.5% ಬಡ್ಡಿ ವಿನಾಯಿತಿ ಅನ್ವಯಿಸುತ್ತದೆ.
- MIG-I (ಮಧ್ಯಮ ಆದಾಯ ಗುಂಪು 1): ವಾರ್ಷಿಕ ಆದಾಯ ₹6 ಲಕ್ಷದಿಂದ ₹12 ಲಕ್ಷದ ಒಳಗಿದ್ದರೆ, ಇವರಿಗೆ ₹9 ಲಕ್ಷದವರೆಗಿನ ಗೃಹ ಸಾಲದ ಮೇಲೆ ಶೇ. 4% ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತದೆ. ಇವರಿಗೆ ಒಟ್ಟಾರೆ ಸುಮಾರು ₹2.35 ಲಕ್ಷದವರೆಗೆ ಹಣದ ಉಳಿತಾಯವಾಗುತ್ತದೆ.
- MIG-II (ಮಧ್ಯಮ ಆದಾಯ ಗುಂಪು 2): ವಾರ್ಷಿಕ ಆದಾಯ ₹12 ಲಕ್ಷದಿಂದ ₹18 ಲಕ್ಷದ ಒಳಗಿರುವ ಜನರಿಗೆ ₹12 ಲಕ್ಷದವರೆಗಿನ ಸಾಲದ ಮೇಲೆ ಶೇ. 3% ರಷ್ಟು ಬಡ್ಡಿ ಸಬ್ಸಿಡಿ ಲಭ್ಯವಿದ್ದು, ಸುಮಾರು ₹2.30 ಲಕ್ಷದ ಹಣ ನೇರವಾಗಿ ಲಾಭ ಸಿಗುತ್ತದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಯಾರೆಲ್ಲಾ ಅರ್ಹರು? (ಕಡ್ಡಾಯ ನಿಯಮಗಳು)
ಈ ಯೋಜನೆಯು ಬಡವರ ಏಳಿಗೆಗೆ ಎಂದು ರಚಿಸಿದ್ದು ಆದರೇ ಹಲವಾರು ಅರ್ಹರಲ್ಲದ ಶ್ರೀಮಂತರು ಈ ಯೋಜನೆಯ ದುರುಪಯೋಗ ಪಡಿಸಿಕೊಳ್ಳುತಿದ್ದಾರೆ ಆದ್ದರಿಂದ ಸರ್ಕಾರ ಇದನ್ನು ತಡೆಯಲು ಮತ್ತು ನಿರ್ಬಂಧಿಸಲು ಕಟ್ಟುನಿಟ್ಟಾದ ಅರ್ಹತಾ ಮಾನದಂಡಗಳನ್ನು ಜಾರಿ ಮಾಡಿದೆ:
- ಸ್ವಂತ ಮನೆ ಇರಬಾರದು: ದೇಶದ ಯಾವುದೇ ಭಾಗದಲ್ಲೂ ಅರ್ಜಿದಾರನ ಹೆಸರಿನಲ್ಲಿ ಅಥವಾ ಆತನ ಕುಟುಂಬದ ಯಾವುದೇ ಸದಸ್ಯರ (ಗಂಡ, ಹೆಂಡತಿ, ಅಪ್ರಾಪ್ತ ಮಕ್ಕಳು) ಹೆಸರಿನಲ್ಲಿ ಸ್ವಂತ ಮನೆ ಇರಲೇಬಾರದು.
- ಸರ್ಕಾರಿ ನೌಕರಿ ಇರಬಾರದು: ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿ ಇರಬಾರದು ಅಥವಾ ತಿಂಗಳಿಗೆ ಸ್ಥಿರವಾದ ದೊಡ್ಡ ಆದಾಯ ಹೊಂದಿರಬಾರದು.
- ವಾಹನ ಮತ್ತು ಆಸ್ತಿ ನಿಯಮ: ಕುಟುಂಬದಲ್ಲಿ ಯಾವುದೇ ನಾಲ್ಕು ಚಕ್ರಗಳ ವಾಹನ (ಕಾರ್, ಟ್ರ್ಯಾಕ್ಟರ್) ಇರಬಾರದು. ಐದು ಎಕರೆಗಿಂತ ಹೆಚ್ಚು ನೀರಾವರಿ ಭೂಮಿ ಹೊಂದಿರಬಾರದು.
- ಮಹಿಳೆಯರ ಹೆಸರಿಗೆ ಆದ್ಯತೆ: ನಗರ ಯೋಜನೆಯಡಿ ಸಬ್ಸಿಡಿ ಪಡೆಯಲು ಮನೆಯ ಮಹಿಳಾ ಸದಸ್ಯರನ್ನು (ತಾಯಿ ಅಥವಾ ಹೆಂಡತಿ) ಮನೆಯ ಮಾಲೀಕರು ಅಥವಾ ಸಹ-ಮಾಲೀಕರನ್ನಾಗಿ (Co-owner) ಮಾಡುವುದು ಕಡ್ಡಾಯವಾಗಿದೆ.
- ಈ ಹಿಂದೆ ಸೌಲಭ್ಯ ಪಡೆದಿರಬಾರದು: ಅರ್ಜಿದಾರರ ಕುಟುಂಬವು ಈ ಹಿಂದೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ವಸತಿ ಯೋಜನೆಗಳ (ಉದಾ: ಬಸವ ವಸತಿ, ಅಂಬೇಡ್ಕರ್ ವಸತಿ, ಆಶ್ರಯ ಯೋಜನೆ) ಅಡಿಯಲ್ಲಿ ಧನಸಹಾಯ ಅಥವಾ ಮನೆ ಪಡೆದಿರಬಾರದು.
ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಬೇಕಾಗುವ ಪ್ರಮುಖ ದಾಖಲೆಗಳು
ನೀವು ಗ್ರಾಮೀಣ ಅಥವಾ ನಗರ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ಮೂಲ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ:
- ಆಧಾರ್ ಕಾರ್ಡ್: ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ (ಮೊಬೈಲ್ ನಂಬರ್ ಲಿಂಕ್ ಆಗಿರುವುದು ಅತ್ಯಗತ್ಯ).
- ರೇಷನ್ ಕಾರ್ಡ್: ಬಿಪಿಎಲ್ (BPL) ಪಡಿತರ ಚೀಟಿ (ಗ್ರಾಮೀಣ ಭಾಗದ ಉಚಿತ ಮನೆಗೆ ಬಿಪಿಎಲ್ ಕಾರ್ಡ್ ಕಡ್ಡಾಯ).
- ಆದಾಯ ಮತ್ತು ಜಾತಿ ಪ್ರಮಾಣಪತ್ರ: ತಹಶೀಲ್ದಾರರಿಂದ ಪಡೆದ ಇತ್ತೀಚಿನ ಚಾಲ್ತಿಯಲ್ಲಿರುವ ಪ್ರಮಾಣಪತ್ರ.
- ಸ್ವಂತ ಸೈಟ್ ದಾಖಲೆಗಳು: ನೀವು ಮನೆ ಕಟ್ಟಿಕೊಳ್ಳುವ ಜಾಗದ ಖಾತಾ ಬದಲಾವಣೆ ಪತ್ರ, ಕ್ರಯಪತ್ರ (Sale Deed) ಅಥವಾ ಗ್ರಾಮ ಪಂಚಾಯಿತಿಯಿಂದ ನೀಡಲಾದ ಹಕ್ಕು ಪತ್ರ.
- ಬ್ಯಾಂಕ್ ಪಾಸ್‌ಬುಕ್: ಜಂಟಿ ಖಾತೆ ಅಥವಾ ಸ್ವಂತ ಖಾತೆಯ ಪಾಸ್‌ಬುಕ್ (NPCI ಮ್ಯಾಪಿಂಗ್ ಆಗಿರಬೇಕು).
- ಮನೆಯ ಫೋಟೋ: ಪ್ರಸ್ತುತ ನೀವು ವಾಸಿಸುತ್ತಿರುವ ಕಚ್ಚಾ ಮನೆ ಅಥವಾ ಬಾಡಿಗೆ ಮನೆಯ ಮುಂದೆ ನಿಂತು ತೆಗೆದ ಜಿಪಿಎಸ್ (GPS) ಫೋಟೋ.
ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ (Step-by-Step)
ಗ್ರಾಮೀಣ ಮತ್ತು ನಗರ ಪ್ರದೇಶದ ಅರ್ಜಿ ಪ್ರಕ್ರಿಯೆಗಳು ವಿಭಿನ್ನವಾಗಿದ್ದು, ಕೆಳಗಿನ ಹಂತಗಳನ್ನು ಅನುಸರಿಸಿ ನೀವು ಅರ್ಜಿ ಸಲ್ಲಿಸಬಹುದು:
ಗ್ರಾಮೀಣ ಪ್ರದೇಶದಲ್ಲಿ ಅರ್ಜಿ ಸಲ್ಲಿಸುವ ವಿಧಾನ (PMAY-G)
ಗ್ರಾಮೀಣ ಭಾಗದಲ್ಲಿ ಗ್ರಾಹಕರು ಸ್ವತಃ ಆನ್‌ಲೈನ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
- ಹಂತ 1: ನಿಮ್ಮ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ, ಅಲ್ಲಿನ ಪಿಡಿಒ (PDO) ಅಥವಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯವರನ್ನು ಸಂಪರ್ಕಿಸಿ.
- ಹಂತ 2: ಸರ್ಕಾರವು ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ (SECC 2011) ಹಾಗೂ ‘Awas Plus’ ಸಮೀಕ್ಷೆಯ ಆಧಾರದ ಮೇಲೆ ಹಳ್ಳಿಗಳಲ್ಲಿ ಈಗಾಗಲೇ ಅರ್ಹರ ಪಟ್ಟಿಯನ್ನು ಸಿದ್ಧಪಡಿಸಿರುತ್ತದೆ.
- ಹಂತ 3: ನಿಮ್ಮ ಹೆಸರು ಆ ಪಟ್ಟಿಯಲ್ಲಿದ್ದರೆ, ಪಂಚಾಯಿತಿ ಸಿಬ್ಬಂದಿಗಳೇ ತಮ್ಮ ಅಧಿಕೃತ ಲಾಗಿನ್ ಐಡಿ ಮೂಲಕ ನಿಮ್ಮ ದಾಖಲೆಗಳನ್ನು ‘PMAY-G’ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ನಂತರ ಗ್ರಾಮ ಸಭೆಯಲ್ಲಿ ನಿಮ್ಮ ಹೆಸರು ಅನುಮೋದನೆಗೊಂಡು ಮನೆ ಮಂಜೂರಾಗುತ್ತದೆ.
ನಗರ ಪ್ರದೇಶದಲ್ಲಿ ಅರ್ಜಿ ಸಲ್ಲಿಸುವ ವಿಧಾನ (PMAY-U)
ನಗರ ಪ್ರದೇಶದಲ್ಲಿ ವಾಸಿಸುವವರು ಇಂಟರ್ನೆಟ್ ಸೆಂಟರ್ ಮೂಲಕ ಅಥವಾ ಸ್ವತಃ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು:
- ಹಂತ 1: ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ (pmaymis.gov.in) ಭೇಟಿ ನೀಡಿ.
- ಹಂತ 2: ಹೋಮ್ ಪೇಜ್‌ನಲ್ಲಿರುವ ‘Citizen Assessment’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ ವೆರಿಫೈ ಮಾಡಿ.
- ಹಂತ 3: ಅದರ ನಂತರ ಅಪ್ಲಿಕೇಶನ್ ಫಾರ್ಮ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ವೈಯಕ್ತಿಕ ವಿವರ, ವಿಳಾಸ, ವಾರ್ಷಿಕ ಆದಾಯ ಮತ್ತು ಸೈಟ್‌ನ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
- ಹಂತ 4: ನಿಮ್ಮ ಆಧಾರ್, ಫೋಟೋ ಮತ್ತು ಆದಾಯ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಿ ‘Submit’ ಬಟನ್ ಒತ್ತಿ. ನಂತರ ಸಿಗುವ ಸ್ವೀಕೃತಿ ಪತ್ರವನ್ನು (Acknowledgement) ಪ್ರಿಂಟ್ ತೆಗೆದುಕೊಳ್ಳಿ.
- ಹಂತ 5: ಸ್ಥಳೀಯ ನಗರಸಭೆ ಅಥವಾ ಪುರಸಭೆ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಜಾಗವನ್ನು ಪರಿಶೀಲಿಸಿದ ನಂತರ ನಿಮ್ಮ ಸಬ್ಸಿಡಿ ಅರ್ಜಿಯನ್ನು ಅಂಗೀಕರಿಸುತ್ತಾರೆ.
- ಗಮನಿಸಿ: ನೀವು ಬ್ಯಾಂಕ್ ಲೋನ್ ಮೂಲಕ ಮನೆ ಖರೀದಿಸುತ್ತಿದ್ದರೆ, ನೇರವಾಗಿ ಬ್ಯಾಂಕ್ ಮ್ಯಾನೇಜರ್ ಸಂಪರ್ಕಿಸಿ PMAY ಸಬ್ಸಿಡಿ ಫಾರ್ಮ್ ಭರ್ತಿ ಮಾಡಿಕೊಡುವ ಮೂಲಕವೂ ಈ ಸೌಲಭ್ಯ ಪಡೆಯಬಹುದು.
ಸುಳ್ಳು ಮಾಹಿತಿ ನೀಡಿ ಮನೆ ಪಡೆದರೆ ಆಗುವ ತೊಂದರೆಗಳು
ಹಲವುರು ತಮಗೆ ಸ್ವಂತ ಮನೆ ಇದ್ದರೂ, ಬಾಡಿಗೆ ಮನೆಯಲ್ಲಿದ್ದೇವೆ ಎಂದು ಸುಳ್ಳು ಅಫಿಡವಿಟ್ ನೀಡಿ ಅಥವಾ ಆದಾಯವನ್ನು ಮುಚ್ಚಿಟ್ಟು ಈ ಯೋಜನೆಯಡಿ ಮನೆ ಅಥವಾ ಸಬ್ಸಿಡಿ ಪಡೆಯಲು ಪ್ರಯತ್ನಪಡುತಿದ್ದರೆ . ಆದರೆ ಸರ್ಕಾರವು ಪ್ರಸ್ತುತ ಜಿಪಿಎಸ್ (GPS) ತಂತ್ರಜ್ಞಾನ ಮತ್ತು ಆಧಾರ್ ಲಿಂಕ್ಡ್ ಆಸ್ತಿ ವೆರಿಫಿಕೇಶನ್ ವ್ಯವಸ್ಥೆಯನ್ನು ಜಾರಿಗೆ ಬಂದಿದೆ . ಅಧಿಕಾರಿಗಳ ತನಿಖೆಯ ವೇಳೆ ನೀವು ಸುಳ್ಳು ಮಾಹಿತಿ ನೀಡಿರುವುದು ಸಾಬೀತಾದರೆ, ಮಂಜೂರಾದ ಮನೆ ತಕ್ಷಣ ರದ್ದಾಗುತ್ತದೆ. ಅಷ್ಟೇ ಅಲ್ಲದೆ, ಸರ್ಕಾರದಿಂದ ಪಡೆದ ಹಣವನ್ನು ಭಾರಿ ಬಡ್ಡಿಯೊಂದಿಗೆ ವಾಪಸ್ ವಸೂಲಿ ಮಾಡಲಾಗುತ್ತದೆ ಮತ್ತು ವಂಚನೆ ಪ್ರಕರಣದಡಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಕಡು ಬಡವರಿಗೆ ಈ ಯೋಜನೆಯ ಲಾಭ ಸಿಗುವಂತೆ ಸಹಕರಿಸಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)
1. ಪಿಎಂ ಆವಾಸ್ ಯೋಜನೆಯಡಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿದೆಯೇ? ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸುವುದು ಸಂಪೂರ್ಣ ಉಚಿತವಾಗಿದೆ. ಆದರೆ ನೀವು ಗ್ರಾಮಾ ಒನ್ ಅಥವಾ ಸೈಬರ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಿದರೆ ಆಪರೇಟರ್‌ಗಳಿಗೆ ಕೇವಲ ₹30 ರಿಂದ ₹50 ಗಳ ಸೇವಾ ಶುಲ್ಕವನ್ನು ನೀಡಬೇಕಾಗುತ್ತದೆ.
2. ಅರ್ಜಿ ಸಲ್ಲಿಸಿದ ಎಷ್ಟು ದಿನಗಳಲ್ಲಿ ಮನೆ ಹಣ ಬಿಡುಗಡೆಯಾಗುತ್ತದೆ? ಅರ್ಜಿ ಸಲ್ಲಿಕೆಯಾದ ನಂತರ ಅಧಿಕಾರಿಗಳ ಭೌತಿಕ ಪರಿಶೀಲನೆ (Physical Verification) ನಡೆಯುತ್ತದೆ. ನಿಮ್ಮ ಜಾಗದ ಜಿಪಿಎಸ್ ಫೋಟೋ ಅಪ್‌ಲೋಡ್ ಆದ ನಂತರ, ಬಜೆಟ್ ಲಭ್ಯತೆಗೆ ಅನುಗುಣವಾಗಿ 3 ರಿಂದ 6 ತಿಂಗಳ ಒಳಗೆ ಹಂತ-ಹಂತವಾಗಿ ಹಣ ಬಿಡುಗಡೆಯಾಗುತ್ತದೆ.
3. ಈ ಯೋಜನೆಯಡಿ ಹಳೇ ಮನೆಯನ್ನು ದುರಸ್ತಿ ಮಾಡಿಕೊಳ್ಳಲು (Repair) ಹಣ ಸಿಗುತ್ತದೆಯೇ? ಹೌದು, PMAY ನಗರ ಯೋಜನೆಯಡಿ ನಿಮ್ಮ ಹತ್ತಿರ ಈಗಾಗಲೇ ಕಚ್ಚಾ ಮನೆ ಇದ್ದು, ಅದನ್ನು ಪಕ್ಕಾ ಮನೆಯಾಗಿ ನವೀಕರಣ ಮಾಡಿಕೊಳ್ಳಲು ಅಥವಾ ವಿಸ್ತರಿಸಲು (Enhancement) ಬಯಸಿದರೆ ಸರ್ಕಾರದಿಂದ ₹1.5 ಲಕ್ಷದವರೆಗೆ ಆರ್ಥಿಕ ಸಹಾಯಧನ ಪಡೆಯಲು ಅವಕಾಶವಿದೆ.
4. ಆನ್‌ಲೈನ್‌ನಲ್ಲಿ ನನ್ನ ಅರ್ಜಿಯ ಸ್ಥಿತಿಯನ್ನು (Status) ಚೆಕ್ ಮಾಡುವುದು ಹೇಗೆ? ನೀವು pmaymis.gov.in ವೆಬ್‌ಸೈಟ್‌ಗೆ ಭೇಟಿ ನೀಡಿ, ‘Track Your Assessment Status’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಿಮ್ಮ ಅಪ್ಲಿಕೇಶನ್ ನಂಬರ್ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಸುಲಭವಾಗಿ ತಿಳಿಯಬಹುದು.